ಶ್ರೀಮದ್ ಭಗವದ್ಗೀತಾ ಧ್ಯಾನ ಶ್ಲೋಕಗಳು == ಅದ್ಯಯನ ಕ್ರಮ == ಸಾಮಾನ್ಯವಾಗಿ ಎಲ್ಲರೂ ಗೀತಾ ಪಠಣದ ಆರಂಭದಲ್ಲಿ ಒಂಭತ್ತು ಧ್ಯಾನ ಶ್ಲೋಕಗಳನ್ನು ಹೇಳುವ ರೂಢಿ ಇದೆ. ಇವು ಸೊಗಸಾದ ಭಾಷಾ ಸೌಂದರ್ಯವುಳ್ಳ , ಲಯಬದ್ಧವಾದ, ಭಕ್ತಿಪೂರ್ಣವಾದ ಶ್ಲೋಕಗಳಾಗಿವೆ. ವೈಷ್ಣವರಲ್ಲಿ ಧ್ಯಾನ ಶ್ಲೋಕದ ಪ್ರಸಿದ್ಧವಾದ ಒಂಭತ್ತನೆಯ ಶ್ಲೋಕವನ್ನು ಮಾತ್ರಾ ಹೇಳುವ ರೂಢಿ ಇದೆ. ಹೆಚ್ಚಾಗಿ ಮೊದಲಿಗೆ, ಗೀತಾ ಸುಗೀತಾ ಕರ್ತವ್ಯಾ | ಕಿಮನ್ಯೈಃ ಶಾಸ್ತ್ರ ವಿಸ್ತರೈಃ || ಯಾ ಸ್ವಯಂ ಪದ್ಮನಾಭಸ್ಯ | ಮುಖ ಪದ್ಮಾ ದ್ವಿನಿಃ ಸೃತಾ || ಎಂಬ ಶ್ಲೋಕ ಹೇಳಿ ನಂತರ ಧ್ಯಾನ ಶ್ಲೋಕಗಳನ್ನು ಹೇಳಿ ಗೀತಾ ಪಠಣ ಮಾಡುತ್ತಾರೆ. ಕೆಲವರು ಗೀತಾ ಪಠಣದ ಕೊನೆಯಲ್ಲಿ ವರಾಹ ಪುರಾಣ ದಲ್ಲಿರುವ ಗೀತಾ ಮಹಾತ್ಮ್ಯವನ್ನು ಪಠಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಹೃದಯಾದಿ ಕರಷಡಂಗ ವಿನ್ಯಾಸದೊಂದಿಗೆ ಮುಗಿಸುತ್ತಾರೆ; ಆದರೆ ಅದು ಕಡ್ಡಾಯವಲ್ಲ ; ಏಕೆಂದರೆ ಜ್ಞಾನಿಗಳಾದ ಭಾಷ್ಯಕಾರರು ಯಾರೂ ಹಾಗೆ ಹೇಳಿಲ್ಲ. ಅದನ್ನು ಕೆಲವೇ ಸಂಪ್ರಾದಾಯದವರು ಅನುಸರಿಸುತ್ತಾರೆ. ಕೆಲವರಲ್ಲಿ ಸ್ಕಂದ ಪುರಾಣದ ಗೀತಾ ಮಹಾತ್ಮ್ಯ ಹೇಳಿ/ ಓದಿ ಧ್ಯಾನ ಶ್ಲೋಕ ಹೇಳಿ ಕರಷಡಂಗ ವಿನ್ಯಾಸ ಮಾಡಿ ಮುಕ್ತಾಯ ಮಾಡುತ್ತಾರೆ. ಪಾರಾಯಣ ಪೂಜೆ ಮಾಡುವವರು ಆರತಿ ಪದ್ಯ ಗಳನ್ನು ಹೇಳುತ್ತಾರೆ. ಆದರೆ ಜ್ಞಾನಿಗಳಾದ ಭಾಷ್ಯಕಾರರು ಯಾರೂ ಹಾಗೆ ಮಾಡಲು ಹೇಳಿಲ್ಲ. ಕೊನೆಯಲ್ಲಿ ಕೆಲವು ಜನಪ್ರಿಯ ಸ್ತೋತ್ರ ಹೇಳುವ ರೂಢಿಯೂ ಇದೆ. - ಭಗವದ್ಗೀತೆಯ ಒಂದೇ ಅಧ್ಯಾಯ ಓದುವವರು ಮುಂದಿನ ಅಧ್ಯಾಯದ ಮೊದಲ ಶ್ಲೋಕ ಓದಿ (ಪಠಿಸಿ) ನಂತರ ಧ್ಯಾನ ಶ್ಲೋಕಗಳನ್ನು ಹೇಳಿ ಮುಕ್ತಾಯ ಮಾಡುತ್ತಾರೆ. ಕಾಲಾವಕಾಶ ವಿರದಿದ್ದಲ್ಲಿ ಕೊನೆಯ (೯) ಧ್ಯಾನ ಶ್ಲೋಕದಿಂದ ಆರಂಬಿಸಿ ಪಠನಾ ನಂತರ ಅದನ್ನೇ ಹೇಳಿ ಮುಗಿಸಬಹುದು. == ಪಾಠ == ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ, ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ | ಅದ್ವೈತಾಮೃತವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಮ್ ಅಂಬ ತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಮ್ || ೧ || ಟೀಕೆ : ಅಮ್ಮ (ಅಂಬ) ಭಗವದ್ಗೀತೆ , ಭಗವಂತನಾದ ನಾರಾಯಣನು ತಾನೇ ಅರ್ಜುನನಿಗೆ ಹೇಳಿದ್ದಾಗಿಯೂ, ಪುರಾಣಗಳನ್ನು ಬರೆದ ಋಷಿಗಳಾದ ವ್ಯಾಸರು ಮಹಾಭಾರತದ ನಡುವೆ ಪೋಣಿಸಿದ್ದಾಗಿಯೂ, ಅದ್ವೈತವೆಂಬ ಅಮೃತ ಮಳೆಯನ್ನು ಸುರಿಸುವಳಾಗಿಯೂ , ಭಗವತ್ಸ್ವರೂಪಳಾಗಿಯೂ, ಹದಿನೆಂಟು ಅಧ್ಯಾಯ ಉಳ್ಳವಳಾಗಿಯೂ, ಸಂಸಾರ ದುಃಖವನ್ನು ಹೋಗಲಾಡಿಸತಕ್ಕವಳಾಗಿಯೂ ಇರುವ ನಿನ್ನನ್ನು ಧ್ಯಾನಿಸುತ್ತೇನೆ. ||೧ || - ನಮೋ‌sಸ್ತು ತೇ ವ್ಯಾಸ ವಿಶಾಲಬುದ್ಧೆ ಫುಲ್ಲಾರವಿಂದಾಯತಪತ್ರನೇತ್ರ | ಯೇನ ತ್ವಯಾ ಭಾರತತೈಲಪೂರ್ಣಃ ಪ್ರಜ್ವಲಿತೋ ಜ್ಞಾನಮಯಃ ಪ್ರದೀಪಃ || ೨ || ಟೀ : ಭಾರತವೆಂಬ ಸಮೃದ್ಧಿಯಾದ ಎಣ್ಣೆಯುಳ್ಳ ಜ್ಞಾನಮಯವೆಂಬ ದೀಪವನ್ನು ಹಚ್ಚಿದವರಾಗಿಯೂ , ಅರಳಿದ ಕಮಲದಂತೆ ಅಗಲವಾದ ಕಣ್ಣುಳ್ಳವರಾಗಿಯೂ , ವಿಸ್ತಾರವಾದ ಬುದ್ಧಿಯುಳ್ಳವರಾಗಿಯೂ , ಇರುವ ವ್ಯಾಸರೇ ನಿಮಗೆ ನಮಸ್ಕಾರ. || ೨ || - ಪ್ರಪನ್ನಪಾರಿಜಾತಾಯ ತೋತ್ರವೇತ್ರೈಕಪಾಣಯೆ | ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ || ೩ || ಟೀ : ಶರಣರಿಗೆ ಕಲ್ಪವೃಕ್ಷವಾದವನೂ , ಒಂದುಕೈಯಲ್ಲಿ ಚಾಟಿಯಿಂದ ಕೂಡಿದ ಬೆತ್ತ ಹಿಡಿದಿರುವವನೂ, ಜ್ಞಾನೋಪದೇಶ ಲಕ್ಷಣವನ್ನು ತೋರಿಸುವ ಹಸ್ತಮುದ್ರೆಯುಳ್ಳವನೂ, ಗೀತೆಯೆಂಬ ಅಮೃತವನ್ನು ಕರೆಯುತ್ತಿರುವವನೂ ಆದ ಕೃಷ್ಣನಿಗೆ ಅಡ್ಡಬೀಳುತ್ತೇನೆ (ನಮಸ್ಕರಿಸುತ್ತೇನೆ). ||೩|| - ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲ ನಂದನಃ| ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ||೪|| ಟೀ : ಎಲ್ಲಾ ಉಪನಿಷತ್ ಗಳೂ ಆಕಳುಗಳು ; ಗೋಪಾಲ ನಂದನನಾದ ಶ್ರೀಕೃಷ್ಣ ಹಾಲು ಕರೆಯುವವನು. ಅರ್ಜುನನು ಕರು. ಹಾಲು ಕುಡಿಯುವವರು ಪಂಡಿತರು ; ಶ್ರೇಷ್ಟವಾದ ಗೀತಾಮೃತವು ಹೀಗೆ ಕರೆದ ಹಾಲು.||೪|| - ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ | ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ || ೫ || ಟೀ : ವಸುದೇವನ ಮಗನಾಗಿಯೂ , ದೇವತಾ ಸ್ವರೂಪನಾಗಿಯೂ, ಕಂಸ ಚಾಣೂರ ಮೊದಲಾದವರನ್ನು ಕೊಂದವನಾಗಿಯೂ, ದೇವಕಿಗೆ ಬಹು ಸಂತೋಷವನ್ನು ಉಂಟುಮಾಡುವವನಾಗಿಯೂ , ಜಗತ್ತಿಗೆಲ್ಲಾ ಧರ್ಮವನ್ನು ತಿಳಿಸುವವನಾಗಿಯೂ, ಇರುವ ಕೃಷ್ಣನಿಗೆ ಎರಗುತ್ತೇನೆ. ||೫|| - ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ ಶಲ್ಯಗ್ರಾಹವತೀ ಕ್ರಪೇಣ ವಹನೀ ಕರ್ಣೇನ ವೇಲಾಕುಲಾ | ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರರ್ತಿನೀ ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ || ೬ || ಟೀ : ಭೀಷ್ಮ , ದ್ರೋಣ ಎಂಬುವವರು ದಡದಂತೆಯೂ , ಜಯದ್ರಥನು ನೀರಿನಂತೆಯೂ, ಕೌರವರು ಕಲ್ಲು ಬಂಡೆಗಳಂತೆಯೂ, ಶಲ್ಯನು ದೊಡ್ಡ ಮೀನಿನಂತೆಯೂ, ಅಶ್ವತ್ಥಾಮ ವಿಕರ್ಣ ಇವರು ಭಯಂಕರವಾದ ಮೊಸಳೆಗಳಂತೆಯೂ, ದುರ್ಯೋಧನನು ಸುಳಿಯಂತೆಯೂ, ಇದ್ದ ಯುದ್ಧವೆಂಬ ನದಿಯನ್ನು ಪಾಂಡವರು ದಾಟಿದರು, ದಾಟಿಸಿದವನು ಶ್ರೀ ಕೃಷ್ಣನು .||೬|| - ಪಾರಾಶರ್ಯವಚಃ ಸರೋಜಮಮಲಂ ಗೀತಾರ್ಥಗಂಧೋತ್ಕಟಮ್ ನಾನಾಖ್ಯಾನಕಕೇಸರಂ ಹರಿಕಥಾಸಂಬೋಧನಾಬೋಧಿತಮ್ | ಲೋಕೆ ಸಜ್ಜನಷಟ್ಪದೈರಹರಹಃ ಪೇಪೀಯಮಾನಂ ಮುದಾ ಭೂಯಾದ್ಭಾರತಪಂಕಜಂ ಕಲಿಮಲಪ್ರಧ್ವಂಸಿ ನಃ ಶ್ರೇಯಸೇ || ೭ || ಟೀ : ಪರಾಶರರ ಮಗನಾದ ವ್ಯಾಸರ ಮಾತುಗಳೆಂಬ ಸರೋವರದಲ್ಲಿ ಹುಟ್ಟಿದ್ದಾಗಿಯೂ , ನಿರ್ಮಲವಾಗಿಯೂ, ಗೀತೆಯೆಂಬ ಶ್ರೇಷ್ಠವಾದ ಗಂಧವನ್ನುಳ್ಳದ್ದಾಗಿಯೂ, ಅನೇಕ ಉಪಕಥೆ ಗಳೆಂಬ ಎಸಳುಗಳನ್ನುಳ್ಳದ್ದಾಗಿಯೂ, ಹರಿಕಥೆಯೆಂಬತಿಳಿವಿನಿಂದ ಅರಳಿದ್ದಗಿಯೂ, ಜಗತ್ತಿನಲ್ಲಿ ಸಜ್ಜನರೆಂಬ ಭ್ರಮರಗಳು ಯಾವಾಗಲೂ ಸಂತೋಷದಿಂದ ಕುಡಿಯುತ್ತಿರುವುದಾಗಿಯೂ , ಕಲಿಯುಗದ ದೋಷವನ್ನು ಕಳೆಯುವುದಾಗಿಯೂ ಇರುವ ಭಾರತವೆಂಬ ಕಮಲವು ನಮಗೆ ಶ್ರೇಯಸ್ಸನ್ನುಂಟುಮಾಡಲಿ ||೭ || - ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ | ಯತ್ಕೃಪಾ ತಮಹಂ ವಂದೇ ಪರಮಾಂದಂ ಮಾಧವಂ ||೮|| (* ಯತ್ ಕೃಪಾ ತಮಹಂ) ಟೀ : ಯಾರ ಕೃಪೆಯು ಮೂಕನನ್ನು ಮಾತಾಳಿಯನ್ನಾಗಿಯೂ , ಕುಂಟನನ್ನು ಪರ್ವತವನ್ನು ದಾಟುವವನನ್ನಾಗಿಯೂ , ಮಾಡುವುದೋ ಆ ಪರಮಾನಂದ ಸ್ವರೂಪನಾದ ಶ್ರೀಕೃಷ್ಣನನ್ನು ನಮಸ್ಕರಿಸುತ್ತೇನೆ. ||೮|| - ಯಂ ಬ್ರಹ್ಮಾ ವರುಣೇಂದ್ರ ರುದ್ರ ಮರುತಃ ಸ್ತುನ್ವಂತಿ ದಿವ್ಯೈ ಸ್ತವೈಃ | ವೇದೈಃ ಸಾಂಗಪದಕ್ರಮೋಪನಿಷದೈ ರ್ಗಾಯಂತಿ$ ಯಂ ಸಾಮಗಾಃ || ಧ್ಯಾನಾವಸ್ಥಿತ ತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ | ಯಸ್ಯಾಂತಂ ನ ವಿದುಃ ಸುರಾಸುರಾ ಗಣಾ ದೇವಾಯ ತಸ್ಮೈ ನಮಃ ||೯|| ಯಾವನನ್ನು ಬ್ರಹ್ಮನೂ ವರುಣನೂ ಇಂದ್ರನೂ ಮರುತ್ತುಗಳೂ ದಿವ್ಯವಾದ ಸ್ತೋತ್ರಗಳಿಂದ ಹೊಗಳುತ್ತಾರೋ, ಯಾವನನ್ನು ಸಾಮ ಗಾಯಕರು ಪದ೧ಗಳಿಂದಲೂ, ಕ್ರಮಗಳಿಂದಲೂ ಕೂಡಿರುವ ವೇದಗಳಿಂದ ಗಾನಮಾಡುತ್ತಾರೋ, ಯಾವನನ್ನು ಯೋಗಿಗಳು ಧ್ಯಾನದಲ್ಲಿ ಮನಸ್ಸನ್ನು ಒಮ್ಮಖವಾಗಿ ಮಾಡಿಕೊಂಡು ನೋಡುವರೋ, ಯಾರ ಆಳವನ್ನು ದೇವತೆಗಳೂ, ರಾಕ್ಷಸರೂ, ಯಾರೂ ತಿಳಿಯರೋ, ಆ ದೇವನಿಗೆ ನಮಸ್ಕಾರ. ಟಿಪ್ಪಣಿ $ : (೧ ವೇದ ಮಂತ್ರಗಳನ್ನು - ಪದ, ಕ್ರಮ, ಜಟೆ , ಘನ ಈ ವಿಶಿಷ್ಟ ವಿಧಾನದಲ್ಲಿ ಪಠಿಸುವರು) == ನೋಡಿ == ಭಗವದ್ಗೀತಾ ತಾತ್ಪರ್ಯ = ಉಲ್ಲೇಖಗಳು = = == ಉಲ್ಲೇಖ ==